ಶಿವಮೊಗ್ಗ,ಏ.26: ಮಾಜಿ ಸಂಸದ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಚಿವ ಹೆಚ್.ವಿಶ್ವನಾಥ್ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಟೀಕೆ ಮಾಡುವ ಮೂಲಕ ಈ ದೇಶದ ಭವಿಷ್ಯತ್ತಿನ ಮಕ್ಕಳಿಗೆ, ಪೋಷಕರಿಗೆ ಹಾಗೂ ಈ ನಾಡಿನ ಶಿಕ್ಷಕರ ಸಮುದಾಯಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಫಲಿತಾಂಶವು ನಮ್ಮದು ಇನ್ನೊಂದು ಗ್ಯಾರಂಟಿ ಇದ್ದಂತೆ. ಈ ಬಾರಿ ಮಕ್ಕಳು ಉತ್ತಮ ಫಲಿತಾಂಶವನ್ನು ಪಡೆಯುವ ಮೂಲಕ ಶಿಕ್ಷಕರಿಗೆ , ಪೋಷಕರಿಗೆ ಹಾಗೂ ಇಲಾಖೆಗೂ ಗೌರವ ತಂದಿದ್ದಾರೆ. ಆದರೆ ಇದನ್ನು ಸಹಿಸಲಾಗದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಹೆಚ್.ವಿಶ್ವನಾಥ ಸೇರಿದಂತೆ ಇನ್ನಿತರ ನಾಯಕರು ಅಪಹಾಸ್ಯ ಮಾಡುತ್ತಿದ್ದಾರೆ. ಇದು ಮಕ್ಕಳ ಶ್ರಮಕ್ಕೆ ಮಾಡುವ ಅವಮಾನ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು
ವಿದ್ಯಾರ್ಥಿಗಳ ದೀರ್ಘ ಪರಿಶ್ರಮದಿಂದ ಹಾಗೂ ಇಲಾಖೆಗಳು ತರಬೇತಿಯಿಂದ ಮಕ್ಕಳು ಪಕ್ವಗೊಂಡು ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ಮಾಡದೆ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಆದರೆ ಪರಿಷತ್ ಶಾಸಕ ಹೆಚ್.ವಿಶ್ವನಾಥ್ ಅವರು ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ಕೊಟ್ಟಿದ್ದರಿಂದ ಇಷ್ಟೊಂದು ಗರಿಷ್ಟ ಪ್ರಮಾಣದಲ್ಲಿ ಫಲಿತಾಂಶ ಏರಿಕೆ ಆಗಿದೆ ಎನ್ನುತ್ತಾರೆ. ಹೆಚ್ ವಿಶ್ವನಾಥ್ ಶಿಕ್ಷಣ ಸಚಿವರಾಗಿದ್ದರು. ಅವರ ಅವಧಿಯಲ್ಲಿ ಇಂತಹ ಕೆಲಸ ಮಾಡಿರಬೇಕು ಹಾಗಾಗಿ ಹೇಳುತ್ತಿದ್ದಾರೆ. ವಿಶ್ವನಾಥ್ ತಮ್ಮ ವಯಸ್ಸಿಗೆ ತಕ್ಕಂತೆ ಘನವೆತ್ತವಾಗಿ ಮಾತನಾಡಬೇಕು. ಇಂತಹ ಮಾತು ಅವರ ವ್ಯಕ್ತಿತ್ವಕ್ಕೆ ಶೋಭೆ ತರವುದಿಲ್ಲ ಎಂದು ಟೀಕಿಸಿದರು.
ಗಮನಿಸಿ:ಸಂಘ ಪರಿವಾರಕ್ಕೆ ಮಹಿಳೆಯರ ಬಗ್ಗೆ ಯಾವ ಗೌರವವೂ ಇಲ್ಲ: ಪುಷ್ಪ ಶಿವಕುಮಾರ್
ಎಸ್‌ಸಿ ಎಸ್‌ಟಿ ಸಮುದಾಯಗಳಲ್ಲಿ ಫಲಿತಾಂಶ ಏರಿಕೆ:
ಎಸ್‌ಸಿ ಎಸ್ಟಿ ಸಮುದಾಯ ಮಕ್ಕಳು ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಬಡತನ ಹಾಗೂ ಆರ್ಥಿಕವಾಗಿ ದುರ್ಬಲ ಸ್ಥಿತಿ ಇರುವುದರಿಂದ ಶಿಕ್ಷಣ ಬಗ್ಗೆ ಅಷ್ಟಾಗಿ ಒತ್ತು ಕೊಡದೆ ಫಲಿತಾಂಶದಲ್ಲಿ ಹಿಂದುಳಿಯುತ್ತಿದ್ದರು. ಆದರೆ ನಮ್ಮ ಸರ್ಕಾರ ಹಾಗೂ ನಮ್ಮ ಇಲಾಖೆ ಪೂರ್ವ ಪರೀಕ್ಷೆಯಲ್ಲಿ ಹೆಚ್ಚಿನ ತರಬೇತಿ ನೀಡಿ ಓದಲು ಪ್ರೋತ್ಸಾಹ ನೀಡಿದ ಪರಿಣಾಮ ಇವತ್ತು ಫಲಿತಾಂಶದಲ್ಲಿ ಎಸ್‌ಸಿ ವಿದ್ಯಾರ್ಥಿಗಳು ಶೇ.18.5 ಹಾಗೂ ಎಸ್‌ಟಿ ವಿದ್ಯಾರ್ಥಿಗಳು ಶೇ.17.5 ರಷ್ಟು ಪ್ರಗತಿ ಸಾಧಿಸಿದ್ದಾರೆ ಎಂದರು.
ಇಲಾಖೆ 5800 ಹುದ್ದೆಗಳ ಭರ್ತಿಗೆ ಕ್ರಮ :
ಒಳಮೀಸಲಾತಿಗೆ ಸಂಬಂಧಿಸಿದಂತೆ ಪ್ರಕರಣ ಸರ್ವೋಚ್ಚ ನಾಯಾಲಯದಲ್ಲಿ ಇದ್ದರೂ ಅದರ ಸೂಚನೆ ಮೇರೆಗೆ ಸಂವಿಧಾನ ಮತ್ತು ನ್ಯಾಯಾಲಯದ ಸೂಚನೆಗೆ ಧಕ್ಕೆ ಬರದಂತೆ ಕ್ಯಾಬಿನೆಟ್‌ನಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಆ ಪ್ರಕಾರ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. 56 ಸಾವಿರ ಹುದ್ದೆಗಳನ್ನು ತುಂಬಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗುವುದು. ರಾಜ್ಯದ ಅನುದಾನಿತ ಶಾಲೆಗಳಲ್ಲಿ ಇರುವ 5800 ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುವುದು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ, ಶಾಸಕಿ ಬಲ್ಕೀಶ್ ಬಾನು, ಮಾಜಿ ಶಾಸಕ ಆಯನೂರು ಮಂಜುನಾಥ್, ಡಿಡಿಪಿಐ ಮಂಜುನಾಥ್, ಬಿಇಓ ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ರಾಜ್ಯ ಜವಳಿ ನಿಗಮದ ಅಧ್ಯಕ್ಷ ಚೇತನ್‌ಗೌಡ, ಪ್ರಮುಖರಾದ ಸಿ.ಎಸ್.ಚಂದ್ರ ಭೂಪಾಲ್, ರಮೇಶ್‌ಶೆಟ್ಟಿ, ಕಲೀಂ ಪಾಷಾ, ಅಬ್ದುಲ್‌ವಾಹಿದ್ ಅಡ್ಡು, ಕಲಗೋಡು ರತ್ನಾಕರ, ಎನ್.ರಮೇಶ್ ಮೊದಲಾದವರಿದ್ದರು.
