ಶಂಕರಘಟ್ಟ ,ಮೇ.6 : ಕೃತಕ ಬುದ್ದಿಮತ್ತೆ(ಎಐ), ಡಿಜಿಟಲ್ ಕ್ರಾಂತಿ ಪ್ರಸ್ತುತ ಅತ್ಯವಶ್ಯಕವಾಗಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಇದು ಸಹಾಯಕ ಎಂದು ರಾಜ್ಯಪಾಲ ಹಾಗೂ ವಿ.ವಿ.ಕುಲಾಧಿಪತಿಗಳಾದ ಥಾವರ್ ಗೆಹ್ಲೋಟ್ ಹೇಳಿದರು.
ಕುವೆಂಪು ವಿವಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ 35 ನೇ ವಾರ್ಷಿಕ ಘಟಿಕೋತ್ಸವದ ಅಗ್ರಾಸನವಹಿಸಿ ಅವರು ಮಾತನಾಡಿದರು.
ನಾವು ಇಂದು ಕೌಶಲ್ಯಾಭಿವೃದ್ಧಿಗೆ ಒತ್ತುಕೊಡಬೇಕಾಗಿದೆ. ಭಾರತ ಆರ್ಥಿಕವಾಗಿ ಮುಂದುವರಿಯುತ್ತಿದ್ದು, ಮೇಕ್ ಇನ್ ಇಂಡಿಯಾದಿಂದ ವಿಕಸಿತ ಭಾರತವಾಗಲು ಸಾಧ್ಯವಾಗಿದೆ. ಹಾಗಾಗಿ ನಾವು ಎಐ ಮತ್ತು ಡಿಜಿಟಲ್ ಕ್ರಾಂತಿಯತ್ತ ಹೊರಳಬೇಕಾಗಿದೆ ಎಂದರು.
ಕುವೆಂಪು ವಿವಿಯು ಮಹಾನ್ ಸಾಹಿತಿ, ಚಿಂತಕ ಕುವೆಂಪುರವರ ಆದರ್ಶಗಳಿಂದ ಪ್ರೇರಣೆ ಪಡೆದಿದ್ದು, ವಿವಿ ಶಿಕ್ಷಣ ಕೇಂದ್ರ ಉತ್ತಮ ಕೊಡುಗೆ ನೀಡುತ್ತಿದೆ. ಘಟಿಕೋತ್ಸವದ ಮೂಲಕ ಕುವೆಂಪು ಅವರ ವಿಶ್ವಮಾನವ ಆದರ್ಶ ಎಲ್ಲೆಡೆ ಪ್ರಸಾರವಾಗುತ್ತದೆ. ವಿದ್ಯಾರ್ಥಿಗಳಿಗೆ ಪರಿಶ್ರಮ ಬಹಳ ಮುಖ್ಯ. ನೀವು ಪಡೆದಿರುವ ಪದವಿ ಕೂಡ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲವಾಗಿದೆ ಎಂದರು.
ಗಮನಿಸಿ: 7 ಸ್ವರ್ಣ ಪದಕ – ನಿರೀಕ್ಷೆಗೂ ಮೀರಿದ ಪ್ರತಿಫಲ
ಉನ್ನತ ಶಿಕ್ಷಣ ಸಚಿವ ಹಾಗೂ ಸಹ ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಮಾತನಾಡಿ, 1986 ರಲ್ಲಿ ಮೈಸೂರು ವಿ.ವಿ.ಯಿಂದ ಬೇರ್ಪಟ್ಟ ಕುವೆಂಪು ವಿವಿ ಈಗ ಉನ್ನತ ಮಟ್ಟಕ್ಕೆ ತಲುಪಿದೆ. ಹೊಸ ವಿವಿ ಸ್ಥಾಪನೆಗಳತ್ತ ನಾವು ನೋಡುತ್ತಿದ್ದೇವೆ. ವಿವಿಗಳ ಪರಿಸ್ಥಿತಿಗಳು ಹದಗೆಡುತ್ತಿವೆ. ವಿಶ್ವಮಾನವ ಹೆಸರು ಹೊಂದಿರುವ ವಿವಿಗಳಲ್ಲೂ ಹಲವು ಸಮಸ್ಯೆಗಳಿವೆ. ತನಿಖೆಗಳು ನಡೆಯುತ್ತಿವೆ ಎಂದು ವಿಷಾದಿಸಿದ ಅವರು, ವಿವಿಗಳು ಸ್ವಂತ ಕಾಲಮೇಲೆ ನಿಲ್ಲಲು ಕಷ್ಟಪಡುತ್ತಿವೆ. ಇದರ ಜೊತೆಗೆ ಸಂಶೋಧನೆಗೂ ಒತ್ತುಕೊಡಬೇಕಾಗಿದೆ ಎಂದರು.

ತಾಂತ್ರಿಕ ಶಿಕ್ಷಣದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸಲಾಗಿತ್ತು. ಅದರ ವರದಿ ಈಗ ಬಂದಿದೆ. ಶೇ.17 ರಷ್ಟು ಮಾತ್ರ ಇಂಜಿನಿಯರಿಂಗ್ ಮಾಡಿದವರಿಗೆ ಕೆಲಸ ಸಿಗುತ್ತದೆ. ಒಂದು ಲಕ್ಷ ಸೀಟ್ ಕಂಪ್ಯೂಟರ್‌ಗೆ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಇದನ್ನು ಗಮನಿಸಿದರೆ ಕಾಲೇಜುಗಳು ಅಧಿಕವಾಗಿ ಹಣ ಪಡೆಯುತ್ತಿದ್ದಾರೆ ಎಂದು ತಿಳಿದು ಬರುತ್ತಿದೆ ಎಂದರು.
ಬಿ.ಎ.ಸೇರಿದಂತೆ ಕಲಾಪ್ರಕಾರಕ್ಕೆ ವಿದ್ಯಾರ್ಥಿಗಳು ಸೇರುವುದು ಕಡಿಮೆಯಾಗುತ್ತಿದೆ. ಇದರಿಂದ ಸುಮಾರು 70 ಸಾವಿರ ಸೀಟುಗಳು ಇಲ್ಲವಾಗುತ್ತವೆ. ವಿಶೇಷವಾಗಿ ಇಂದು ಆಂಗ್ಲಭಾಷೆಗೆ ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಪದವಿ ಮತ್ತು ಡಿಪ್ಲೋಮಾ ಇಂಗ್ಲೀಷ್ ಕೋರ್ಸ್ ಮತ್ತು ಸ್ಟಾರ್ಟ್ ಅಪ್ ಕೋರ್ಸ್ ಮಾಡುತ್ತಿದ್ದೇವೆ. ಇದು ಯುವಕರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕುಲಸಚಿವರುಗಳಾದ ಹೇಮಂತ್ ಎನ್., ಪ್ರೊ.ಆರ್.ತಿಮ್ಮರಾಯಪ್ಪ ಸೇರಿದಂತೆ ಹಲವರಿದ್ದರು.
