ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.26
‘ನ್ಯಾಯ ಎಲ್ಲರಿಗೂ ಸುಲಭವಾಗಿ ಸಿಗಬೇಕು‘ ಎನ್ನುವುದು ಸಂವಿಧಾನದ ಆಶಯ. ಅದಕ್ಕೆ ಪೂರಕವಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು, ಇದಕ್ಕೆ ಅಗತ್ಯವಿರುವ ಜಸ್ವಂತ್ ಸಿಂಗ್ ಆಯೋಗ ನಿಗದಿಪಡಿಸಿರುವ ಎಲ್ಲಾ ಮಾನದಂಡಗಳನ್ನು ನಮ್ಮ ಶಿವಮೊಗ್ಗ ಪೂರ್ಣವಾಗಿ ಪೂರೈಸುತ್ತದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಸಂಚಾರಿ ಪೀಠಕ್ಕೆ ಆಗ್ರಹಿಸಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲಿ ಭಾಗವಹಿಸಿ ಮಾತನಾಡುತ್ತಿದ್ದ ಸಂಸದರು, ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರು ನ್ಯಾಯಕ್ಕಾಗಿ 300ಕ್ಕೂ ಹೆಚ್ಚು ಕಿಲೋಮೀಟರ್ ದೂರದ ಬೆಂಗಳೂರಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಧಾರವಾಡ ಮತ್ತು ಕಲಬುರಗಿ ಮಾದರಿಯಲ್ಲಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮಧ್ಯ ಬಿಂದುವಾಗಿರುವ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದು ಭೌಗೋಳಿಕವಾಗಿ ಹಾಗೂ ನ್ಯಾಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ ಎಂದರು.
ಕೆಲವರು ಮಂಗಳೂರು ಪೀಠದ ವ್ಯಾಪ್ತಿಗೆ ಶಿವಮೊಗ್ಗವನ್ನು ಸೇರಿಸುವ ಮಾತನಾಡುತ್ತಿದ್ದಾರೆ. ಆದರೆ ಭೀಕರ ಮಳೆಗಾಲದಲ್ಲಿ ಶಿರಾಡಿ, ಚಾರ್ಮಾಡಿ ಅಥವಾ ಆಗುಂಬೆ ಘಾಟ್ಗಳಂತಹ ಅಪಾಯಕಾರಿ ರಸ್ತೆಗಳನ್ನು ದಾಟಿ ಜನರು ಮಂಗಳೂರಿಗೆ ಸಂಚರಿಸಿ ನ್ಯಾಯ ಪಡೆಯುವುದು ಪ್ರಾಯೋಗಿಕವಾಗಿ ಅಸಾಧ್ಯ. ಅದಕ್ಕಾಗಿಯೇ ವಕೀಲರ ಸಮುದಾಯ ಮತ್ತು ವಿವಿಧ ಬಾರ್ ಅಸೋಸಿಯೇಷನ್ಗಳು ಮಂಗಳೂರು ಪ್ರಸ್ತಾಪವನ್ನು ತಿರಸ್ಕರಿಸಿವೆ.
ಗಮನಿಸಿ: ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪನೆಗೆ ಮೆಡಿಕಲ್ ಐಕಾನ್ಸ್ ಅಗ್ರಹ
ನಿಮ್ಮ ಸಂಸದನಾಗಿ ಕೇಂದ್ರ ಕಾನೂನು ಸಚಿವಾಲಯದ ಮಟ್ಟದಲ್ಲಿ ಈ ಪ್ರಸ್ತಾಪಕ್ಕೆ ಧ್ವನಿಯಾಗಲು ನಾನು ಬದ್ಧನಾಗಿದ್ದೇನೆ. ರಾಜ್ಯ ಸರ್ಕಾರವು ಅಗತ್ಯ ಮೂಲಸೌಕರ್ಯ ಒದಗಿಸಿ, ಮುಖ್ಯ ನ್ಯಾಯಮೂರ್ತಿಗಳ ಸಹಮತಿಯೊಂದಿಗೆ ಕೇಂದ್ರಕ್ಕೆ ಸ್ಪಷ್ಟ ಪ್ರಸ್ತಾಪವನ್ನು ಸಲ್ಲಿಸಬೇಕಿದೆ. ಶಿವಮೊಗ್ಗ ಹೈಕೋರ್ಟ್ ಪೀಠ ಸ್ಥಾಪನೆಯಾಗುವವರೆಗೆ ನಾವೆಲ್ಲರೂ ಪಕ್ಷಾತೀತವಾಗಿ ಒಟ್ಟಾಗಿ ಹೋರಾಡೋಣ ಎಂದರು.
ಹೋರಾಟ ಸಮಿತಿ ಗೌರವಾಧ್ಯಕ್ಷರಾದ ಡಿ ಜಿ ಬಸಪ್ಪಗೌಡರು, ವಕೀಲರ ಸಂಘದ ಅಧ್ಯಕ್ಷರಾದ ಜಿ ಆರ್ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ , ವಕೀಲ ಕೆ ಪಿ ಶ್ರೀಪಾಲ್ ಉಪಸ್ಥಿತರಿದ್ದರು.
