Homeರಾಜಕೀಯಕೇಂದ್ರ ಸಚಿವ ಸಂಪುಟ ಪುನರ್‌ರಚನೆ: ಬಿ ವೈಆರ್ ಹೆಸರು ಮತ್ತೆ ಮುನ್ನಲೆಗೆ - ಅಡ್ಡಮತದಾನಕ್ಕೆ ಅಶೋಕ್,...

ಕೇಂದ್ರ ಸಚಿವ ಸಂಪುಟ ಪುನರ್‌ರಚನೆ: ಬಿ ವೈಆರ್ ಹೆಸರು ಮತ್ತೆ ಮುನ್ನಲೆಗೆ – ಅಡ್ಡಮತದಾನಕ್ಕೆ ಅಶೋಕ್, ವಿಜಯೇಂದ್ರ ತಲೆ ದಂಡ ?!

Spread the love

ಕೇಂದ್ರ ಸಚಿವ ಸಂಪುಟ ಪುನರ್‌ರಚನೆ: ಬಿ ವೈಆರ್ ಹೆಸರು ಮತ್ತೆ ಮುನ್ನಲೆಗೆ
ಅಡ್ಡಮತದಾನಕ್ಕೆ ಅಶೋಕ್, ವಿಜಯೇಂದ್ರ ತಲೆ ದಂಡ ?!

* ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಜುಲೈತಿಂಗಳಲ್ಲಿ ಪುನರ್ ರಚನೆಗೊಳ್ಳುತ್ತಿದ್ದು, ಕೇಂದ್ರ ಸಂಪುಟದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ. ವೈ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಕಲ್ಪಿಸುವ ಬಗ್ಗೆ ದೆಹಲಿ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂಬ ಸಂಗತಿ ಹೊರಬಿದ್ದಿದೆ.

2024 ರ ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನೆಲ್ಲೆ ಮೋದಿ ಸಂಪುಟದಲ್ಲಿ ಬಿ.ವೈ ರಾಘವೇಂದ್ರ ಅವರು ಸಚಿವರಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವಾದರೂ ಅಂತಿಮವಾಗಿ ರಾಜ್ಯದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಅವರುಗಳು ಸಚಿವರಾಗಿದ್ದು, ಬಿ.ವೈ ರಾಘವೇಂದ್ರ ಅವರಿಗೆ ಅವಕಾಶ ಕೈ ತಪ್ಪಿಹೋಯಿತು.

ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ ವಿಜಯೇಂದ್ರ ಅವರು ನೇಮಕಗೊಂಡಿದ್ದರಿಂದ ಸಹೋದರ ಬಿ.ವೈ ರಾಘವೇಂದ್ರ ಅವರಿಗೆ ಕೇಂದ್ರ ಸಚಿವ ಸ್ಥಾನ ಕೈ ತಪ್ಪಿ ಹೋಗಿದ್ದು ಸಹಜವೇ ಆಗಿತ್ತು. ವಿ. ಸೋಮಣ್ಣ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿಸಿ ಬಿ.ವೈ ರಾಘವೇಂದ್ರ ಅವರನ್ನು ಕೇಂದ್ರ ಸಚಿವರನ್ನಾಗಿಸುವ ದೆಹಲಿ ವರಿಷ್ಠರ ಪ್ರಸ್ತಾಪವನ್ನು ಯಡಿಯೂರಪ್ಪ ಅವರು ನಿರಾಕರಿಸಿದ್ದು, ತಮ್ಮ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಪಕ್ಷದ ನಾಯಕತ್ವ ಪಟ್ಟಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಇದರ ಪರಿಣಾಮ ವಿ. ಸೋಮಣ್ಣ ಅವರಿಗೆ ಕೇಂದ್ರ ಸಚಿವ ಸ್ಥಾನ ದಕ್ಕಿತು.

ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪುನರ್ ರಚನೆಗೊಳ್ಳುತ್ತಿರುವ ಸಚಿವ ಸಂಪುಟದಲ್ಲಿ ಬಿ.ವೈ ರಾಘವೇಂದ್ರ ಅವರಿಗೆ ಅವಕಾಶ ಕೊಟ್ಟರೆ ಹೇಗೆ? ಎಂಬ ಪ್ರಸ್ತಾಪಗಳು ಕೇಂದ್ರದ ವರಿಷ್ಠ ನಡುವೆ ನಡೆದಿದೆ ಎನ್ನಲಾಗುತ್ತಿದೆ.

ಮೊನ್ನೆಯಷ್ಟೆ ನಡೆದ ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿರು. ಬೆಳವಣಿಗೆ ದೆಹಲಿ ಬಿಜೆಪಿ ನಾಯಕರನ್ನು ತೀವ್ರ ಅಸಮಾಧಾನಗೊಳಿಸಿದೆ. ರಾಜ್ಯ ಬಿಜೆಪಿಯಲ್ಲಿ ಗುಂಪುಗಾರಿಕೆ, ನಾಯಕತ್ವ ವಿರೋಧಿ ಧೋರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮವೇ ಅಡ್ಡಮತದಾನ, ಇದು ಬಿಜೆಪಿಯ ಸಂಘಟನಾ ಶಕ್ತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ವರಿಷ್ಠರು ಪರಿಗಣಿಸಿದ್ದಾರೆ ಎನ್ನಲಾಗುತ್ತಿದೆ.

ಅಡ್ಡಮತದಾನಕ್ಕೆ ತಲೆ ತಂಡ ಆಗಲೇಬೇಕು. ಅದರಲ್ಲೂ ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸದನದ ಒಳಗೆ, ಹೊರಗೆ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಡುವಲ್ಲಿ ವಿಫಲರಾಗಿದ್ದಾರೆ. ಅವರನ್ನು ಬದಲಾಯಿಸಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ಅಶೋಕ್ ಅವರ ಬದಲಿಗೆ ವಿಪಕ್ಷ ನಾಯಕ ಸ್ಥಾನಕ್ಕೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ಅದೇ ರೀತಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ದವೂ ಪಕ್ಷದಲ್ಲಿ ಹಿರಿಯ ನಾಯಕರುಗಳೇ ಅಸಮಾಧಾನಿತರಾಗಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಪಕ್ಷದಲ್ಲಿ ಗುಂಪುಗಾರಿಕೆ , ಅಸಮಾಧಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ನಾಯಕತ್ವ ಬದಲಾವಣೆಯ ಒತ್ತಡಗಳು ಹೈಕಮಾಂಡ್‌ಗೆ ತಲುಪುತ್ತಿವೆ. ನಾಯಕತ್ವದ ವಿರುದ್ದ ಇರುವ ಅಸಮಾಧಾನವೇ ಶಾಸಕರು ಅಡ್ಡ ಮತದಾನ ಮಾಡಲು ಕಾರಣ ಎಂಬ ವಾದವೂ ಪಕ್ಷದೊಳಗೆ ಕೇಳಿ ಬರತ್ತಿದ್ದು, ನಾಯಕತ್ವದ ಬಗ್ಗೆ ಅಸಮಾಧಾನವಿದ್ದರೆ ಅದನ್ನು ಪಕ್ಷದ ವರಿಷ್ಠರಿಗೆ ತಿಳಿಸಬಹುದಿತ್ತು. ಆದಕ್ಕಾಗಿ ಅಡ್ಡಮತದಾನ ಮಾಡುವ ಮೂಲಕ ಪಕ್ಷಕ್ಕೆ ದ್ರೋಹ ಬಗೆವುದು ಸರಿಯಲ್ಲ ಎಂಬ ಪಕ್ಷದ ಕೆಲವು ನಾಯಕರುಗಳೇ ಬಹಿರಂಗವಾಗಿ ಹೇಳಿರುವುದು ಪಕ್ಷದೊಳಗಿನ ಬೇಗುದಿಯನ್ನು ಬಹಿರಂಗಪಡಿಸಿದಂತಿದೆ.

ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ವಿ.ಸೋಮಣ್ಣ, ಮುರುಗೇಶ್‌ನಿರಾಣಿ, ಶ್ರೀನಿವಾಸ್ ಪೂಜಾರಿ ಅವರುಗಳಲ್ಲಿ ಒಬ್ಬರನ್ನು ಕೂರಿಸುವ ಬಗ್ಗೆಯೂ ಹೈಕಮಾಂಡ್ ವಲಯದಲ್ಲಿ ಚಿಂತನೆ ನಡೆದಿದೆ.

ಆದರೆ ಯಡಿಯೂರಪ್ಪ ಅವರ ಇಚ್ಛೆಗೆ ವಿರುದ್ದವಾಗಿ ಬಿ.ವೈ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವುದು ಸುಲಭವಲ್ಲ ಎಂದು ಯೋಚಿಸುತ್ತಿರುವ ಹೈಕಮಾಂಡ್ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದೇ ಆದರೆ ಯಡಿಯೂರಪ್ಪ ಅವರ ಇನ್ನೋರ್ವ ಪುತ್ರ ಬಿ.ವೈ ರಾಘವೇಂದ್ರ ಅವರನ್ನು ಕೇಂದ್ರ ಸಚಿವ ರನ್ನಾಗಿಸುವ ಪ್ರಸ್ತಾಪ ಮುಂದಿಡುವ ಚಿಂತನೆಯಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಬಿ.ವೈ ರಾಘವೇಂದ್ರ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭಿವೃದ್ದಿ ವಿಚಾರಗಳಲ್ಲಿ ಹೆಚ್ಚಿನ ಅಸ್ಥೆ ವಹಿಸಿದ್ದಾರೆ. ಇದು ಅವರ ಜನಪ್ರಿಯತೆಗೂ ಕಾರಣವಾಗಿದೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ತರುವಲ್ಲಿ ಅತ್ಯಂತ ಕ್ರಿಯಾಶೀಲ ಸಂಸದರಾಗಿರುವ ರಾಘವೇಂದ್ರ ಅವರು ಕೇಂದ್ರದ ಸಚಿವರುಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿಕೊಂಡಿದ್ದಾರೆ. ಸಂಸದರ ಮೌಲ್ಯಮಾಪನದಲ್ಲೂ ಹೆಚ್ಚು ಅಂಕಗಳಿಸಿರುವ ಬಿ.ವೈ ರಾಘವೇಂದ್ರ ಕೇಂದ್ರ ಸಂಪುಟದಲ್ಲಿರಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯಗಳು ಬಿಜೆಪಿ ವಲಯದಿಂದಲೆ ಕೇಳಿ ಬರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments