ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜು.29
ಮಹಿಳಾ ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಸಂಸದ ಪ್ರಹ್ಲಾದ್ ಜೋಷಿಯನ್ನು ಪ್ರಧಾನಿ ಮೋದಿ ಕೇಂದ್ರ ಶಿಕ್ಷಣ ಸಚಿವನನ್ನಾಗಿ ಮಾಡಿರುವುದು ಕನ್ನಡಿಗರೆಲ್ಲರೂ ತಲೆತಗ್ಗಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಬುಧವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರಹ್ಲಾದ್ ಜೋಷಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸುವಾಗ ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡಿರುವ ವಿಡಿಯೋ ತುಣುಕನ್ನು ಪ್ರದರ್ಶಿಸುವ ಮೂಲಕ ಕಿಡಿಕಾರಿದ್ದಾರೆ.
ಗಮನಿಸಿ: ಕಾಂಗ್ರೆಸ್‌ನಿಂದ ರೈತರಿಗೆ ಅನ್ಯಾಯ-ಜು.31 ರಂದು ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ: ಬಿವೈವಿ
ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗಿಂತ ಪ್ರಹ್ಲಾದ್ ಜೋಷಿ ಅವರು ಯಾವುದೇ ರೀತಿ ಭಿನ್ನರಲ್ಲ, ಇವರಿಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳು. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಪಕ್ಷಕ್ಕೆ ಬಂದವರು. ಮಹಿಳೆಯರು, ದಲಿತರು, ಬಡವರು, ಹಿಂದುಳಿದ ಜಾತಿಗಳು ಮತ್ತು ಮುಸ್ಲಿಂ – ಕ್ರಿಶ್ಚಿಯನರ ಬಗ್ಗೆ ಆರ್.ಎಸ್.ಎಸ್ ಹೊಂದಿರುವ ಅಭಿಪ್ರಾಯವನ್ನೇ ಹೊಂದಿದವರು. ಇದಕ್ಕಾಗಿಯೇ ಪ್ರಧಾನ್ ಅವರ ಸ್ಥಾನಕ್ಕೆ ಜೋಷಿ ಅವರನ್ನು ತಂದು ಕೂರಿಸಲಾಗಿದೆ. ಇದೊಂದು ರೀತಿ ಊದುವುದನ್ನು ಕೊಟ್ಟು ಬಾರಿಸುವುದನ್ನು ಕೊಂಡು ಬಂದಂತೆ. ಬದಲಾಗಿದ್ದು ಪಾತ್ರಧಾರಿ ಅಷ್ಟೆ, ಸೂತ್ರಧಾರಿಗಳಾದ ಆರ್.ಎಸ್.ಎಸ್ ನ ನಿರ್ದೇಶನದಂತೆ ಇವರೂ ನಡೆದುಕೊಳ್ಳಬೇಕಾಗುತ್ತದೆ ಎಂದು ಕುಟುಕಿದ್ದಾರೆ.

ಗುಜರಾತ್ ಗಲಭೆಯ ಕಾಲದಲ್ಲಿ ಬಿಲ್ಕಿಸ್ ಭಾನು ಎಂಬ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರಿಗಳನ್ನು 2022ರಲ್ಲಿ ಗುಜರಾತ್ ಸರ್ಕಾರ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ್ದನ್ನು ಪ್ರಹ್ಲಾದ ಜೋಷಿ ಅವರು ಸಮರ್ಥಿಸಿ ಅತ್ಯಾಚಾರಿಗಳ ಪರವಾಗಿ ಮಾತನಾಡಿದ್ದರು. ಇಂತಹವರು ಶಿಕ್ಷಣ ಸಚಿವರಾದರೆ ದೇಶದ ಶಿಕ್ಷಣ ವ್ಯವಸ್ಥೆಯ ಗತಿ ಏನಾಗಬಹುದು ಎನ್ನುವುದು ನಮ್ಮೆಲ್ಲರ ಈಗಿನ ಆತಂಕ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯಲ್ಲಿ ಪ್ರಹ್ಲಾದ್ ಜೋಷಿ ಅವರ ಮುಖವಾಡವನ್ನು ಕಿತ್ತೊಗೆದು ದೇಶದ ಮುಂದೆ ನಿಲ್ಲಿಸಿದ್ದಾರೆ. ಸದನದಲ್ಲಿ ಅವರ ಬಾಯಿ ಮುಚ್ಚಿಸಬಹುದು, ಆದರೆ ದೇಶದ ಕೋಟ್ಯಂತರ ಜನರ ಬಾಯಿ ಮುಚ್ಚುವುದು ಸಾಧ್ಯ ಇಲ್ಲ ಎಂದು ಎಚ್ಚರಿಸಿದ್ದಾರೆ.
ಧರ್ಮೇಂದ್ರ ಪ್ರಧಾನ್ ಹಾದಿಯಲ್ಲಿಯೇ ಜೋಷಿ ಅವರು ಹೊರಡುವುದಕ್ಕೆ ಬಹಳ ದಿನಗಳು ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಗ್ಗೆ ಒಂದಿಷ್ಟು ಕಾಳಜಿ ಹೊಂದಿದ್ದರೆ ತಕ್ಷಣ ಶಿಕ್ಷಣ ಖಾತೆಯನ್ನು ಜೋಷಿ ಅವರಿಂದ ಕಿತ್ತುಕೊಂಡು, ಯಾರಾದರೂ ಅರ್ಹರಿದ್ದರೆ ಅಂತವರಿಗೆ ಈ ಮಹತ್ವದ ಖಾತೆಯ ಹೊಣೆ ವಹಿಸಿ ಕೊಡಬೇಕು ಎಂದರು.
