Homeಜಿಲ್ಲೆದೇಶದಲ್ಲಿ ಶಿಕ್ಷಣದ ಮೂಲ ಉದ್ದೇಶ ಬದಲಾಗುತ್ತಿದೆ: ಪ್ರೋ.ಶರತ್ ಅನಂತಮೂರ್ತಿ ವಿಷಾದ

ದೇಶದಲ್ಲಿ ಶಿಕ್ಷಣದ ಮೂಲ ಉದ್ದೇಶ ಬದಲಾಗುತ್ತಿದೆ: ಪ್ರೋ.ಶರತ್ ಅನಂತಮೂರ್ತಿ ವಿಷಾದ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.24

ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಕೌಶಲ್ಯಾಧಾರಿತ ತರಬೇತಿಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ವೈಚಾರಿಕತೆ, ವಿಮರ್ಶಾತ್ಮಕ ಚಿಂತನೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ದಿಸೆಯಲ್ಲಿ ಸಾಗಬೇಕು ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಹೇಳಿದರು.

ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಣಿತ ಪ್ರಾಧ್ಯಾಪಕರು-ಉಪನ್ಯಾಸ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಮನಿಸಿ: ಸರ್ವಾಧಿಕಾರವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಟೆಲೆಕ್ಸ್ ರವಿಕುಮಾರ್ ಸಲಹೆ

ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಬದಲಾವಣೆಗಳು ಕೇವಲ ನೀಟ್ ಪರೀಕ್ಷೆ ಅಥವಾ ರಾಜಕೀಯ ವಿವಾದಗಳಿಗೆ ಸೀಮಿತವಲ್ಲ. ಶಿಕ್ಷಣದ ಮೂಲ ಉದ್ದೇಶವೇ ಬದಲಾಗುತ್ತಿರುವುದು ಗಂಭೀರ ಆತಂಕದ ವಿಷಯವಾಗಿದೆ. ಆಧುನಿಕತೆಯ ಅರ್ಥವನ್ನು ಸರಿಯಾಗಿ ಗ್ರಹಿಸದೇ ಶಿಕ್ಷಣವನ್ನು ಮಾರುಕಟ್ಟೆಯ ವಸ್ತುವಾಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಪ್ರತಿಭಟನೆಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಎಲ್ಲರ ಕೈಯಲ್ಲೂ ಕಾಣಿಸಿಕೊಂಡಿರುವುದು ಸಮಾನತೆ, ನ್ಯಾಯ ಮತ್ತು ವೈಚಾರಿಕ ಚಿಂತನೆಯ ಸಂಕೇತವಾಗಿದೆ. ಸಮಾಜದಲ್ಲಿ ಹೊಸ ಆಲೋಚನೆಗಳು ಮೂಡಬೇಕಾದರೆ ಶಿಕ್ಷಣ ವ್ಯವಸ್ಥೆಯೇ ಪರಿವರ್ತನೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಇಂದಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವಿಚಾರಗಳಿಗಿಂತ ಕೇವಲ ಕೌಶಲ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ಕೌಶಲ್ಯಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ. ಇಂದು ಅಗತ್ಯವೆನಿಸುವ ಕೌಶಲ್ಯ ನಾಳೆ ಪ್ರಸ್ತುತವಾಗದೇ ಇರಬಹುದು. ಆದ್ದರಿಂದ ವಿದ್ಯಾರ್ಥಿಗಳಿಗೆ ಗಟ್ಟಿಯಾದ ಜ್ಞಾನಾಧಾರ, ಯೋಚನಾ ಶಕ್ತಿ ಮತ್ತು ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುವುದು ಶಿಕ್ಷಣದ ಮೂಲ ಗುರಿಯಾಗಬೇಕು ಎಂದರು.

ಬಂಡವಾಳಶಾಹಿ ವ್ಯವಸ್ಥೆ ಶಿಕ್ಷಣವನ್ನು ಸಾರ್ವಜನಿಕ ಹಕ್ಕಾಗಿ ನೋಡುವ ಬದಲು ವ್ಯಾಪಾರೀಕರಣಗೊಳಿಸಿದೆ. ದೇಶದ ಬಹುಪಾಲು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳು ಹಾಗೂ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲೇ ಶಿಕ್ಷಣ ಪಡೆಯುತ್ತಿದ್ದರೂ, ಸರ್ಕಾರಗಳ ನೀತಿಗಳು ಖಾಸಗೀಕರಣದತ್ತ ಹೆಚ್ಚು ಒಲವು ತೋರುತ್ತಿವೆ ಎಂದು ಟೀಕಿಸಿದರು.

ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚುವುದು ಅಪಾಯಕಾರಿ ಬೆಳವಣಿಗೆ. ಪ್ರತಿಯೊಂದು ಸರ್ಕಾರಿ ಶಾಲೆಯೂ ಸಾರ್ವಜನಿಕ ಶಿಕ್ಷಣದ ಸಂಕೇತವಾಗಿದ್ದು, ಅವುಗಳನ್ನು ಉಳಿಸಿ ಬಲಪಡಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಎಂದು ಒತ್ತಾಯಿಸಿದರು.

ಪ್ರಾಂಶುಪಾಲ ಪ್ರೊ.ಎಸ್.ಸಿರಾಜ್ ಅಹ್ಮದ್ ಮಾತನಾಡಿ, ಸಹ್ಯಾದ್ರಿ ಕಾಲೇಜಿನಲ್ಲಿ ಒಂದು ಹೊಸ ದೃಷ್ಟಿಕೋನವನ್ನು ಬೆಳೆಸಲಾಗಿದೆ. ಶಿಕ್ಷಣದ ಬಗ್ಗೆಯೇ ಬಹುದೊಡ್ಡ ಚರ್ಚೆ ನಡೆಯುತ್ತಿರುವಾಗ ನಾವುಗಳು ಭ್ರಮೆ ಮತ್ತು ಅಹಂಕಾರಗಳಿಂದ ಕೂಡಿರುತ್ತೇವೆ. ವಿದ್ಯಾರ್ಥಿಗಳ ಸಂಖ್ಯೆ ಕೂಡ ಮಾನವೀಕ ಶಾಸ್ತ್ರಗಳ ಕಡೆ ಕಡಿಮೆಯಾಗುತ್ತಿವೆ. ಹೊಸ ದಾರಿಗಳನ್ನು ನಾವು ಹುಡುಕಬೇಕಾದುದು ಅನಿವರ‍್ಯವಾಗಿದೆ. ಈ ನಿಟ್ಟಿನಲ್ಲಿ ಲೋಕಜ್ಞಾನ ಪಡೆದವರ ಜೊತೆಗೆ ಸಂವಾದ ಮಾಡಿದರೆ ನಮ್ಮ ಜ್ಞಾನ ವಿಸ್ತಾರವಾಗುವುದರ ಜೊತೆಗೆ ನಮ್ಮ ಅಹಂಕಾರಗಳ ಕೂಡ ಅಳಿಯುತ್ತವೆ. ಶಿಕ್ಷಣ ಕೂಡ ಹೊಸ ದಿಕ್ಕಿನತ್ತ ಚಲಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಸಾಧಕರನ್ನು, ಜ್ಞಾನಿಗಳನ್ನು ನಮ್ಮ ಕಾಲೇಜಿಗೆ ಕರೆಯಿಸಿ ಅವರನ್ನೂ ಕೂಡ ಉಪನ್ಯಾಸಕರನ್ನಾಗಿ ಪರಿವರ್ತಿಸಿ ಪರಿಣಿತ ಪ್ರಾಧ್ಯಾಪಕರೆಂದೇ ಗುರುತಿಸಿ ಈ ಸರಣಿಯನ್ನು ಆಯೋಜಿಸಿದ್ದೇವೆ. ಇದು ಯಶಸ್ವಿಯಾಗುತ್ತದೆ ಎಂಬ ನಂಬಿಕೆ ನಮ್ಮದು ಎಂದರು.

ಕಾರ್ಯಕ್ರಮದಲ್ಲಿ ರೈತ ನಾಯಕ ಕೆ.ಟಿ.ಗಂಗಾಧರ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಪತ್ರಕರ್ತ, ಲೇಖಕ ಎನ್.ರವಿಕುಮಾರ್ (ಟೆಲೆಕ್ಸ್)  ಚಿಂತಕಿ ಪದ್ಮಾಕ್ಷಿ ಕೆ., ಜನಪ್ರಿಯ ವೈದ್ಯ ಡಾ.ಪ್ರೀತಂ, ಕಡೇಕೊಪ್ಪಲು ಪ್ರತಿಷ್ಠಾನದ ಲಕ್ಷ್ಮಿ ನಾರಾಯಣ್, ಐಕ್ಯೂಎಸಿ ಸಂಚಾಲಕ ಡಾ.ಮಂಜುನಾಥ್ ಹೆಚ್.ಪಿ. ಸೇರಿದಂತೆ ಹಲವರಿದ್ದರು.

ಉಪನ್ಯಾಸ ಸರಣಿಯ ಸಂಚಾಲಕ ಪ್ರೋ.ಮೇಟಿಮಲ್ಲಿಕಾರ್ಜುನ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಹಾದೇವ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ನಂತರ ಉಪನ್ಯಾಸ ಸರಣಿಯಲ್ಲಿ ಭಾಗವಹಿಸಿದ ಐದೂ ಗಣ್ಯರು ಕೂಡ ಪ್ರತ್ಯೇಕವಾಗಿ ತರಗತಿಗಳಿಗೆ ಹೋಗಿ ವಿವಿಧ ವಿಷಯಗಳ ಕುರಿತು ಪಾಠದ ರೂಪದಲ್ಲಿ ಉಪನ್ಯಾಸ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments