ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.27
ಥೈಲ್ಯಾಂಡ್‌ನ ಶ್ರೀರಾಚಾದಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ 2026ರಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿರುವ ಪಶುವೈದ್ಯ ಡಾ.ರವಿ ಎಂ ಅವರನ್ನು ಚಂದನ ಪಾರ್ಕ್ ನ ಗೆಳೆಯರು ಸನ್ಮಾನಿಸಿದರು.
ಏಪ್ರಿಲ್ 17 ರಿಂದ 19 ರವರೆಗೆ ನಡೆದ ಸ್ಪರ್ಧೆಯಲ್ಲಿ 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧಿಸಿದ ಡಾ.ರವಿ ಅವರು 50 ಮೀಟರ್ ಬಟರ್ ಫ್ಲೈ ಸ್ಟ್ರೋಕ್ ನಲ್ಲಿ ಚಿನ್ನದ ಪದಕ ಹಾಗೂ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಗೆದಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ರವಿ, “ನನ್ನ ಈ ಕನಸು ನನಸಾಗಿರುವುದು ಜೀವನದ ಹೆಮ್ಮೆಯ ಕ್ಷಣ. ಈ ಎರಡು ಪದಕಗಳನ್ನು ಮೂಕ ಪ್ರಾಣಿಗಳ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ರಾಜ್ಯದ ಸಮಸ್ತ ಪಶುವೈದ್ಯ ಮಿತ್ರರು ಮತ್ತು ಸಿಬ್ಬಂದಿ ವರ್ಗಕ್ಕೆ ಅರ್ಪಿಸುತ್ತೇನೆ” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದನ ಪಾರ್ಕ್ ಕಾರ್ಯದರ್ಶಿ ಎಲ್.ಗುರುರಾಜ್, “ರವಿಯವರ ಸಾಧನೆ ಸಣ್ಣದಲ್ಲ. ಅವರು ಜಿಲ್ಲೆಗೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ” ಎಂದು ಶ್ಲಾಘಿಸಿದರು.
“ಇಂದು ದೇಸಿಯ ಕ್ರೀಡೆಗಳು ಮರೆಯಾಗುತ್ತಿರುವುದು ವಿಷಾದನೀಯ. ಕಬಡ್ಡಿ ಹಾಗೂ ಫುಟ್‌ಬಾಲ್ ಕ್ರೀಡೆಗಳು ಅಂತರಾಷ್ಟ್ರೀಯ ಮನ್ನಣೆಗಳಿಸಿವೆ. ಭಾರತ ಸರ್ಕಾರ ಈ ಕ್ರೀಡೆಗಳಿಗೆ ಆದ್ಯತೆ ನೀಡಬೇಕು” ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಚಂದನ ಪಾರ್ಕ್ ನ ಕ್ರೀಡಾ ಕಾರ್ಯದರ್ಶಿ ಜಿ.ಎಸ್.ಶಿವಕುಮಾರ್, ಸಂಘಟನೆ ಕಾರ್ಯದರ್ಶಿ ಆಶೋಕ್, ಎಂಜಿನಿಯರ್ ಮಂಜುನಾಥ್, ರಂಗೇಗೌಡ, ದೇವರಾಜ್, ಹಾಲೇಶಪ್ಪ, ಜಿ ಕೆಂಚಪ್ಪ ,ರೈಲ್ವೆ ಪ್ರಸಾದ್, ಬಸವರಾಜ್ ಹೆಚ್ ಕೆ, ಸುರೇಶ್,ರಮೇಶ್, ಚಂದ್ರು, ಲಕ್ಷೀರೆಡ್ಡಿ, ಕುಮಾರ್, ರಂಗಣ್ಣ, ನವಿಲಪ್ಪ, ಸ್ವಾಮಿ, ಹಾಲೇಶ್, ಸುಧಾಕರ್, ರಾಮನಾಯ್ಕ, ಮಂಜಪ್ಪ, ಸೇರಿದಂತೆ ಅನೇಕರು ಇದ್ದರು.
