ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.27
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆ ನಂಬಲು ಅರ್ಹವಲ್ಲ ಎಂದು ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭವೊಂದರಲ್ಲಿ ತಾವು ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಅವರ ಹೇಳಿಕೆ ನಂಬಲು ಕಷ್ಟವಾಗುತ್ತಿದೆ. ಯಾಕೆಂದರೆ ಪ್ರತಿ ಬಾರಿ ಚುನಾವಣೆ ಸ್ಪರ್ಧಿಸುವ ವಿಚಾರದಲ್ಲಿ ಅಪ್ಪ ಮತ್ತು ಮಗನ ಹೇಳಿಕೆ ದ್ವಂದ್ವವಾಗಿರುತ್ತದೆ ಎಂದು ಕುಟುಕಿದರು.
ಗಮನಿಸಿ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಆಗುಂಬೆ-ಸನ್‌ಸೆಟ್ ವ್ಯೂಪಾಯಿಂಟ್ ಭದ್ರತೆಯೇ ಪ್ರಶ್ನಾರ್ಥಕ!
ಮುಖ್ಯಮಂತ್ರಿ ಬದಲಾವಣೆ ಮುನ್ನೆಲೆಗೆ ಬಂದಾಗಲೆಲ್ಲಾ ಅವರ ಮಗ ಯತೀಂದ್ರ ಸಿದ್ದರಾಮಯ್ಯ ನಮ್ಮ ತಂದೆಯೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. 2028 ರ ಚುನಾವಣೆಯಲ್ಲೂ ಸ್ಪರ್ಧಿಸಿ ಪಕ್ಷವನ್ನು ಅಧಿಕಾರಕ್ಕೆ ತಂದು ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದರು. ಈಗ ನೋಡಿದರೆ ಚುನಾವಣೆ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ. ಇದು ನಂಬುಲು ಅರ್ಹವೇ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಗೆ ತೆರಳಿ ರಾಜ್ಯದ ಎಂಪಿಗಳ ಜೊತೆ ರಾಜ್ಯದ ಬರದ ಬಗ್ಗೆ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ಸರ್ವೆ ಕೈಗೊಳ್ಳದೆ ಯಾವ ಅಂಕಿ-ಅಂಶವೂ ಇಲ್ಲದೆ ಎಂಪಿಗಳ ಜೊತೆ ಸಭೆ ನಡೆಸುವುದಾದರೂ ಏಕೆ?. ರಾಜ್ಯದಲ್ಲಿ ಸರ್ವೆ ಮಾಡುವ ಅಧಿಕಾರಿಗಳೆಲ್ಲಾ ಎಸ್‌ಐಆರ್‌ನಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದಲ್ಲಿ ಏನೇ ಆರ್ಥಿಕ ಸಂಕಷ್ಟ ಎದುರಾದರೂ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸಲಾಗುತ್ತಿದೆ ಎಂದು ಟೀಕಾಪ್ರಹಾರ ಮಾಡಿದರು.
ರಾಜ್ಯದಲ್ಲಿ ಪೂರ್ಣಪ್ರಮಾಣದ ಮಂತ್ರಿಮಂಡಲ ಇಲ್ಲದೇ ಇರುವುದರಿಂದ ಜಿಲ್ಲೆಗಳಲ್ಲಿ ಉಸ್ತುವಾರಿಗಳಿಲ್ಲ. ಮುಖ್ಯಮಂತ್ರಿಗಳು ಕೇವಲ ಉನ್ನತಾಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ಮಾತ್ರ ನೀಡುತ್ತಿದ್ದಾರೆ. ಬರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಿಎಂ ಇರೋದು ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದಕ್ಕೆ ಮಾತ್ರವಾ ಎಂದು ಗೇಲಿ ಮಾಡಿದರು.
136 ಕಾಂಗ್ರೆಸ್ ಸದಸ್ಯರನ್ನು ಹೊಂದಿದ ಸರ್ಕಾರವಾಗಿದ್ದರೂ ಇದೊಂದು ಬೇಜವಾಬ್ದಾರಿ ಸರ್ಕಾರ. ಸದ್ಯದಲ್ಲಿ ಸಂಪುಟ ವಿಸ್ತರಣೆಯಾಗದಿದ್ದರೆ ಈಗಾಗಲೇ ಮುಂದೂಡಿರುವ ಮಲೆಗಾಲದ ಅಧಿವೇಶನವನ್ನು ಮತ್ತೆ ಮುಂದಕ್ಕೆ ಹಾಕುತ್ತಾರಾ ಎಂದು ಕಟುವಾಗಿ ಪ್ರಶ್ನಿಸಿದರು.
