ಶಿವಮೊಗ್ಗ ಟೆಲೆಕ್ಸ್, ಸುದ್ದಿ.ಸೆ.28
ಶಿಕಾರಪುರದಲ್ಲಿ ಬಿ.ವೈ.ವಿಜಯೇಂದ್ರ ಹೇಗೆ ಗೆದ್ದಿದ್ದಾರೆ ಎಂಬುದು ಗೊತ್ತಿದೆ. ಕೊನೆಯ ಕ್ಷಣದಲ್ಲಿ ಹೇಗೋ ಬಚಾವಾಗಿದ್ದಾರೆ. ಈ ಸಲ ಅಗಾಗುವುದಕ್ಕೆ ಬಿಡುವುದಿಲ್ಲ. ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.
ಸೋಮವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ಬಿ.ವೈ. ವಿಜಯೇಂದ್ರ ಅವರು ಪಾದಯಾತ್ರೆ ಮಾಡಲು ಸಜ್ಜಾಗುತಿದ್ದಾರೆ. ಮಾಡಲಿ, ಆದರೆ ಅವರು ಪಾದಯಾತ್ರೆ ಮಾಡಬೇಕಿರುವುದು ನಮ್ಮ ವಿರುದ್ದ ಅಲ್ಲ. ಭ್ರಷ್ಟಾಚಾರ ವಿರುದ್ದ ಮಾಡಬೇಕು. ಅದರ ರೂವಾರಿ ಅವರ ತಂದೆ ಬಿ.ಎಸ್.ಯಡುಯೂರಪ್ಪನವರೇ. ಅವರು ಯಾಕೆ ಜೈಲಿಗೆ ಹೋದರೆಂದು ಇಡೀ ರಾಜ್ಯಕ್ಕೆ ಗೊತ್ತಿದೆ. ಅವರದ್ದೇ ಪಕ್ಷದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು ಸಾಕಾಗಿಲ್ಲವೇ?” ಎಂದು ಪ್ರಶ್ನಿಸಿದರು.
“ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಯಡಿಯೂರಪ್ಪ ಅವರನ್ನು ಹೇಗೆ ಸೋಲಿಸಿದರು ಗೊತ್ತಿಲ್ಲವೇ? ಸೊರಬದಲ್ಲಿ ನಾನು ಎಷ್ಟು ಅಂತರದಿಂದ ಗೆದ್ದಿದ್ದೇನೆ ಎಂಬುದನ್ನು ನೋಡಲಿ. ಜಿಲ್ಲೆಯಲ್ಲಿ 500 ಎಕರೆ ಲೂಟಿ ಕತೆ ಬಿಚ್ಚಿಡಬೇಕಾ? ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
