ಶಿವಮೊಗ್ಗ, ಅ.12: ಅನ್ನ ಹಾಕುವ ಅನ್ನದಾತನ ಬೆನ್ನೆಲುಬು ಮುರಿಯುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಅವರು ಸೋಮವಾರ ಶಿವಮೊಗ್ಗ ತಾಲ್ಲೂಕಿನ ತ್ಯಾಜವಳ್ಳಿ ಗ್ರಾಮದಲ್ಲಿ ರೈತ ಸ್ವಾಭಿಮಾನ ಯಾತ್ರೆಯ ನಡೆಸಿ ನಂತರ ಮಾತನಾಡಿದರು.
ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 3500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಹೊರೆ ಮತ್ತು ಮೈಕ್ರೋ ಫೈನಾನ್ಸ್ ಗಳ ಚಕ್ರಬಡ್ಡಿ ಕಿರುಕುಳದಿಂದ ಅನ್ನದಾತ ಪರದಾಡುತ್ತಿದ್ದಾನೆ. ಆದರೆ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ. ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಇಡೀ ರಾಜ್ಯದ ರೈತರ ಸಾಲವನ್ನು ಒಂದೇ ಸಹಿಯಲ್ಲಿ ಮನ್ನಾ ಮಾಡಿ ದಿಟ್ಟತನ ತೋರಿದ್ದರು. ಅದೇ ರೀತಿಯ ಇಚ್ಛಾಶಕ್ತಿಯನ್ನು ಈಗಿನ ಸರ್ಕಾರವೂ ತೋರಬೇಕು. ಕೇಂದ್ರದ ಕಡೆ ಬೆರಳು ತೋರಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು” ಎಂದು ಸವಾಲು ಹಾಕಿದರು.
ಹೆಕ್ಟೆರ್‌ಗೆ 25 ಸಾವಿರ ಪರಿಹಾರ ನೀಡಿ:
ರಾಜ್ಯದಲ್ಲಿ ಬರದಿಂದ ರೈತರು ಕಂಗಾಲಾಗಿ ಬೆಳೆ ಕೈಕೊಟ್ಟು ಕೃಷಿ ವೆಚ್ಚ ಭರಿಸಲಾಗದೆ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಸರ್ಕಾರದ ಎಚ್ಚೆತ್ತುಕೊಂಡು ರೈತರಿಗೆ ಕನಿಷ್ಠ ಪ್ರತಿ ಹೆಕ್ಟೇರ್ ಗೆ 25 ಸಾವಿರ ಬರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಗಮನಿಸಿ: ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದರು ಪ್ರಧಾನಮಂತ್ರಿ ಕಚೇರಿ ನಿರಾಕರ- ರಾಹುಲ್ ಕಿಡಿ
“ರಾಜ್ಯ ಸರ್ಕಾರ ಕೇವಲ 220 ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ ಕೈತೊಳೆದುಕೊಂಡಿದೆ. ವಾಸ್ತವದಲ್ಲಿ ಇಡೀ ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ತಕ್ಷಣವೇ ಇಡೀ ರಾಜ್ಯವನ್ನು, ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಇಲ್ಲದಿದ್ದರೆ ರಾಜ್ಯದ ರೈತರೆಲ್ಲರೂ ಸೇರಿ ವಿಧಾನಸೌಧದ ಮುಂದೆ ಬೃಹತ್ ಹಾಗೂ ಉಗ್ರ ಹೋರಾಟ ನಡೆಸುತ್ತೇವೆ ಎಂದು ಬಹಿರಂಗ ಎಚ್ಚರಿಕೆ ನೀಡಿದರು.
ಬಿತ್ತನೆ ಬೀಜ, ಗೊಬ್ಬರ, ಕೂಲಿ ಎಂದು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದ ರೈತನಿಗೆ ಖರ್ಚು ಕೂಡ ವಾಪಸ್ ಬಂದಿಲ್ಲ. ಬೆಳೆ ಸಂಪೂರ್ಣ ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಎಕರೆಗೆ ಕೇವಲ 2500 ರೂ. ಪರಿಹಾರ ಘೋಷಿಸಿರುವುದು ಭಿಕ್ಷೆ ಹಾಕಿದಂತೆ. ಕೂಡಲೇ ವೈಜ್ಞಾನಿಕವಾಗಿ ಜಂಟಿ ಸಮೀಕ್ಷೆ ನಡೆಸಿ ಎಕರೆಗೆ ಕನಿಷ್ಠ 25 ರಿಂದ 30 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ಆಯನೂರು ಮತ್ತು ತ್ಯಾಜವಳ್ಳಿ ಭಾಗದ ರೈತರಾದ ಇಸ್ಮಾಯಿಲ್ ಮತ್ತು ರಮೇಶ್ ಅವರ ಒಣಗಿದ ಜೋಳ ಮತ್ತು ಮೆಕ್ಕೆಜೋಳದ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು. ಜಾನುವಾರುಗಳಿಗೆ ಮೇವು ಇಲ್ಲದಂತಾಗಿದ್ದು, ಕೂಡಲೇ ಮೇವು ಬ್ಯಾಂಕ್ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
