ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.8
ಇದು ಕೇವಲ ಪಾದಯಾತ್ರೆಯಲ್ಲಾ ರೈತರ ನೋವಿಗೆ, ದಲಿತರ ನ್ಯಾಯದ ಕೂಗಿಗೆ, ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರ ನಿರೀಕ್ಷೆಗೆ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಯ ಹಕ್ಕಿಗೆ ಧ್ವನಿಯಾಗುವ ಜನಾಂದೋಲನ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 175 ಕಿ.ಮೀ.ಗಳ ಈ ಪಾದಯಾತ್ರೆ ಕೇವಲ ನಡಿಗೆಯಲ್ಲ, ಇದೊಂದು ಜನಾಂದೋಲನ. ಕಾಂಗ್ರೆಸ್ ಆಡಳಿತ ವೈಫಲ್ಯದ ವಿರುದ್ದ ರೂಪಗೊಂಡಿರುವ ಹೋರಾಟ ಎಂದರು.
ಗಮನಿಸಿ: ಕಿಮ್ಮನೆ v/s ಆರ್ ಎಂಎಂ ಮುಸುಕಿನ ಗುದ್ದಾಟ ಬಯಲು
ಈ ಸರ್ಕಾರದ ಮೇಲೆ ಇದ್ದ ನಿರೀಕ್ಷೆ ಹುಸಿಯಾಗಿದೆ. ಹಾಗಾಗಿ ಬರದಿಂದ ಬೆಳೆ ಒಣಗುತ್ತಿರುವ ರೈತನ ಕಣ್ಣೀರಿಗೆ ಉತ್ತರ ಬೇಕಿದೆ. ತಮ್ಮ ಹಕ್ಕಿನ ಹಣಕ್ಕಾಗಿ ಕಾಯುತ್ತಿರುವ ದಲಿತ ಸಮುದಾಯಕ್ಕೆ ನ್ಯಾಯ ಬೇಕಿದೆ. ಉದ್ಯೋಗಕ್ಕಾಗಿ ಬೆಂಗಳೂರಿನತ್ತ ವಲಸೆ ಹೋಗಬೇಕಾದ ಯುವಕರಿಗೆ ತಮ್ಮ ನೆಲದಲ್ಲೇ ಅವಕಾಶ ಬೇಕಿದೆ. ಉತ್ತರ ಕರ್ನಾಟಕಕ್ಕೆ ನೀರಾವರಿ, ಕೈಗಾರಿಕೆ ಮತ್ತು ಅಭಿವೃದ್ಧಿ ಬೇಕಿದೆ ಎಂದರು.
ಇಂತಹ ಹಲವು ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಡುವ ಸಂಕಲ್ಪದೊಂದಿಗೆ ‘ಬಳ್ಳಾರಿ ಚಲೋ’ ಪಾದಯಾತ್ರೆ ನಡೆಯುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ‘ಚಾರ್ಜ್ಶೀಟ್’ ಅನ್ನು ಜನರ ಮುಂದಿಡುವ ಜನಾಂದೋಲನವಾಗಿದೆ. ಈ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ರೈತರ ಸಂಕಷ್ಟ, ದಲಿತರ ಹಣದ ದುರ್ಬಳಕೆಯ ಆರೋಪ, ಯುವಕರ ಉದ್ಯೋಗ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.
