Homeರಾಜ್ಯಸಿದ್ದರಾಮಯ್ಯ ಅರಸು ದಾಖಲೆ ಮುರಿದಿದ್ದಲ್ಲ; ಮುನ್ನಡೆಸಿದ್ದು. ಬಹುಜನರಾಜಕಾರಣದ ಯಶೋಗಾಥೆ!!

ಸಿದ್ದರಾಮಯ್ಯ ಅರಸು ದಾಖಲೆ ಮುರಿದಿದ್ದಲ್ಲ; ಮುನ್ನಡೆಸಿದ್ದು. ಬಹುಜನರಾಜಕಾರಣದ ಯಶೋಗಾಥೆ!!

Spread the love

ಸಿದ್ದರಾಮಯ್ಯ ಅರಸು ದಾಖಲೆ ಮುರಿದಿದ್ದಲ್ಲ; ಮುನ್ನಡೆಸಿದ್ದು.
ಬಹುಜನರಾಜಕಾರಣದ ಯಶೋಗಾಥೆ!!

ಸಿದ್ದರಾಮಯ್ಯ ಅವರು 2792 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುವ ಮೂಲಕ ಕರ್ನಾಟಕದಲ್ಲಿ ಸುಧೀರ್ಘಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮುರಿದಿದ್ದಾರೆ, ಹಿಂದಿಕ್ಕಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

1972 ಮಾರ್ಚು 20 ರಿಂದ  1980 ಜನವರಿ 7 ವರೆಗೆ ಸತತವಾಗಿ ಏಳೂವರೆ ವರ್ಷ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ಈ ದಾಖಲೆಯನ್ನು ಸಿದ್ದರಾಮಯ್ಯ ಅವರು ಹಿಂದಿಕ್ಕಿ ಮುನ್ನಡೆದಿದ್ದಾರೆ. ಕರ್ನಾಟಕದಲ್ಲಿ ಹೀಗೆ ಸುಧೀರ್ಘಕಾಲ ಮುಖ್ಯಮಂತ್ರಿಯಾದ ದಾಖಲೆ ಹೊಂದಿದ್ದ ಅರಸು ಅವರ ನಂತರದ ಹೆಗ್ಗಳಿಕೆ ಸಿದ್ದರಾಮಯ್ಯ ಅವರಿಗೆ ವರ್ಗಾವಣೆ ಆದಂತಾಗಿದೆ.

ಸಿದ್ದರಾಮಯ್ಯ ಮತ್ತು ದೇವರಾಜ ಅರಸು ಅವರಿಗೂ ಬಹುತೇಕ ಸಾಮ್ಯತೆ ಇದ್ದೇ ಇದೆ. ಆದರೆ ನಾನು ದೇವರಾಜ ಅರಸು ಅಲ್ಲ, ನನಗೂ ಅವರಿಗೂ ಹೋಲಿಕೆ ಇಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಅರಸು ಅವರಿಗೆ ಗೌರವವನ್ನು ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಅರಸು ಅವರ ಕಾಲಘಟ್ಟದ ರಾಜಕೀಯ ಪರಿಸ್ಥಿತಿ ಮತ್ತು ಈಗಿನ ಸಿದ್ದರಾಮಯ್ಯ ಅವರ ಕಾಲದ ರಾಜಕೀಯ ಪರಿಸ್ಥಿತಿ ಭಿನ್ನವಾಗಿರುವುದಂತೂ ನಿಜ, ಆದರೆ ದಲಿತ , ದಮನಿತರಿಗೆ ಸಾಮಾಜಿಕ, ರಾಜಕೀಯ ನ್ಯಾಯವನ್ನು ತಲುಪಿಸುವಲ್ಲಿ ಈ ಇಬ್ಬರೂ ನಾಯಕರದ್ದು ಒಂದೇ ಧೋರಣೆ ಆಗಿರುವುದಂತೂ ನಿಜ,

ಬಲಾಢ್ಯ ಜಾತಿಗಳ ಆಡೋಂಬಲದಂತಿದ್ದ ಕರ್ನಾಟಕದ ರಾಜಕೀಯವನ್ನು ದಲಿತ, ಹಿಂದುಳಿದ, ಅತಿಹಿಂದುಳಿದ ಜಾತಿಗಳ ಕೈಗಿಟ್ಟು ಬಹುಜನ ರಾಜಕಾರಣ ವನ್ನು ಮುನ್ನಲೆಗೆ ತಂದವರು ದೇವರಾಜ ಅರಸು, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ಮುಖ್ಯಧಾರೆಯಲ್ಲಿ ಅವರು ರೂಪಿಸಿದ ಉಳುವವವನೆ ಹೊಲದೊಡೆಯ, ಮಲಹೊರುವ ಪದ್ದತಿ ನಿಷೇದ, ಜೀತ ಪದ್ದತಿ ನಿಷೇಧ ದಂತ ಕ್ರಾಂತಿಕಾರಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಶೋಷಿತ ಸಮುದಾಯಗಳಿಗೆ ಸಂವಿಧಾನಿಕ ಹಕ್ಕುಗಳನ್ನು ಕೊಡ ಮಾಡಿದರು. ಬಹುಜನರಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸಿದವರು ಅರಸು. ಅರಸು ನಂತರದಲ್ಲಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ವೀರಪ್ಪ ಮೂಹ್ಲಿ ,ಧರ್ಮಸಿಂಗ್ ಅವರುಗಳು ಬಲಾಢ್ಯ ಜಾತಿಗಳ ಜಾತಿ ರಾಜಕಾರಣದ ಮುಂದೆ ಸೋತು ಹೋಗಿದ್ದು ಇತಿಹಾಸ,
ಸಿದ್ದರಾಮಯ್ಯ ಅವರನ್ನು ಅರಸು ಅವರಿಗೆ ಹೋಲಿಕೆ ಮಾಡುವುದಾದರೂ ಏಕೆ ಎಂದರೆ ಅರಸು ನಂತರದಲ್ಲಿ ಮುಖ್ಯಮಂತ್ರಿಗಳಾದ ಹಿಂದುಳಿದ ವರ್ಗಗಳ ನಾಯಕರುಗಳು ಅರಸು ಅವರಂತೆ ಜಾತಿ ರಾಜಕಾರಣವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ. ಆದರೆ ಮತೀಯ ರಾಜಕಾರಣ ಮತ್ತು ಜಾತಿ ರಾಜಕಾರಣದ ಮೇಲಾಟಗಳ ಈ ದಿನಗಳಲ್ಲಿ ದಲಿತ, ಹಿಂದುಳಿದ ಅತಿಹಿಂದುಳಿದ , ಅಲ್ಪಸಂಖ್ಯಾತ ಜನ ಸಮುದಾಯಗಳನ್ನು ರಾಜಕೀಯ ಧ್ರುವೀಕರಣಕ್ಕೆ ಒಳಪಡಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಅವರ ರಾಜಕೀಯ ದಿಟ್ಟತನ, ದಲಿತರು, ದಮನಿತರ ಪರ ರಾಜಕಾರಣವನ್ನು ಬಹಿರಂಗವಾಗಿ ಘೋಷಣೆ ಮಾಡಿಕೊಂಡಿದ್ದು ಎಲ್ಲವೂ ಅರಸು ಅವರ ಸಾಮೀಪ್ಯಕ್ಕೆ ತಂದು ನಿಲ್ಲಿಸುತ್ತದೆ.

35 ವರ್ಷಗಳ ಹಿಂದೆ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದ ಕಾಂಗ್ರೇಸ್ ಪಕ್ಷ ಲಿಂಗಾಯಿತ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ ಎಂದು ತಲೆಮಾರುಗಳಿಗೂ ದಾಟಿಸುತ್ತಲೆ ಬಂದಿರುವ ಬಲಾಢ್ಯ ಲಿಂಗಾಯಿತ ಸಮುದಾಯ ತನ್ನ ಹಿಡಿತವನ್ನು , ರಾಜಕೀಯ ಪ್ರಾತಿನಿಧ್ಯವನ್ನು ಪಕ್ಷಾತೀತವಾಗಿ ಕಾಯ್ದುಕೊಂಡಿದೆ. ಈ ಸಮಾಜದ ಜಾತಿವ್ಯವಸ್ಥೆ ವೀರೇಂದ್ರಪಾಟೀಲರಿಗಿಂತಲೂ ಸಮರ್ಥವಾಗಿ ಈ ರಾಜ್ಯದ ಬಡವರ, ದುರ್ಬಲ , ಅನಾಥ ಜನಜಾತಿಗಳ ಪರವಾಗಿ ಅಂತಃಕರಣ ಮತ್ತು ಇಚ್ಛಾಶಕ್ತಿಯಿಂದ ದುಡಿದ ದೇವರಾಜಅರಸು ಅವರಿಗಾದ ರಾಜಕೀಯ ಅನ್ಯಾಯವನ್ನು ಮಾತ್ರ ಮುನ್ನಲೆಯಲ್ಲಿ ಚರ್ಚಿಸುವುದಿಲ್ಲ.
ಅದೇ ರೀತಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಪದ್ಯಚ್ಯುತಿಗೊಳಿಸುವಲ್ಲಿ ಸಿದ್ದರಾಮಯ್ಯ ಅವರೇ ಆಟ ಹೂಡಿದ್ದರೂ ಎಂದು ದೂರುತ್ತಿರುವವರು ಇದೇ ಕುಮಾರಸ್ವಾಮಿ ಅತಿ ಹಿಂದುಳಿದ ವರ್ಗದ ಧರ್ಮಸಿಂಗ್ ಅವರನ್ನು ದಿನ ಬೆಳಗಾಗುವುದರೊಳಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಮೌಲ್ಯಾಧಾರಿತ ರಾಜಕಾರಣವೇ? ಅದು ಧ್ವನಿ ಇಲ್ಲದ ಜಾತಿಯೊಂದರ ನಾಯಕತ್ವವನ್ನೆ ಕೊಂದು ಹಾಕಿದ ರಾಜಕೀಯ ಅನ್ಯಾಯ ಎಂದು ಯಾರಾದರೂ ಪ್ರಶ್ನಿಸಿದರೆ?
ಇನ್ನೂ ಇದಕ್ಕೂ ಮೊದಲು ನಡೆದ ಎಸ್ ,ಬಂಗಾರಪ್ಪ, ವೀರಪ್ಪ ಮೊಹ್ಲಿ ಅವರನ್ನು ರಾಜಕೀಯವಾಗಿ ತುಳಿದವರು ಯಾರು ಎಂಬುದನ್ನು ಮಾತಿಗಾದರೂ ಚರ್ಚೆ ನಡೆಸುವುದಿಲ್ಲ.

ಈ ನೆಲೆಯಲ್ಲಿ ಕರ್ನಾಟಕದ ರಾಜಕಾರಣದ ಒಳಹೊಕ್ಕು ನೋಡುವಾಗ ಬಲಾಢ್ಯಜಾತಿಗಳ ರಾಜಕಾರಣ ಎಲ್ಲಾ ಕಾಲದಲ್ಲೂ ಬಹುಜನ ರಾಜಕಾರಣವನ್ನು ಹತ್ತಿಕ್ಕುವಲ್ಲಿ ಪ್ರಯತ್ನ ನಡೆಸುತ್ತಲೆ ಇವೆ. ಇದು ಈಗಿನ ಸಿದ್ದರಾಮಯ್ಯ ಅವರ ವಿಷಯದಲ್ಲೂ ನಡೆಯುತ್ತಿಲ್ಲ ಎನ್ನಲಾಗದು. ಈ ಎಲ್ಲದರ ನಡುವೆಯೂ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅರಸು ಆಳಿದ ದಿನಗಳನ್ನು ಮೀರಿ ಮುನ್ನಡೆದಿದ್ದಾರೆ. ಇಲ್ಲಿ ಅರಸು ಅವರ ಅವಧಿಯ ದಾಖಲೆಯನ್ನು ಸಿದ್ದರಾಮಯ್ಯ ಅವರು ಮುರಿದರು, ಸರಿಗಟ್ಟಿದರೂ ಎನ್ನುವ ಪದಬಳಕೆಗಿಂತ ಸಿದ್ದರಾಮಯ್ಯ ಅವರು ಅರಸು ಅವರ ಬಹುಜನರಾಜಕಾರಣದ ದಾರಿಯನ್ನು ಗಮ್ಯದ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎನ್ನಬಹುದು.

ದೇವರಾಜ ಅರಸು ಅವರು ಬೇವಿನ ಬೀಜ ತಿಂದು ಮಾವಿನ ಹಣ್ಣು ತಿಂದಷ್ಟೆ ಪ್ರಸನ್ನವದನರಾಗಿ ಈ ಸಮಾಜದ ಅಂಚಿನ ಜನರಿಗಾಗಿ ದುಡಿದು ದಣಿದವರು, ಅವರಿಂದ ರಾಜಕೀಯ ಅರಿವು, ಅಧಿಕಾರ ಎಲ್ಲವನ್ನು ಪಡೆದ ಅದೇ ಹಿಂದುಳಿದ, ದಲಿತ ವರ್ಗಗಳ ನಾಯಕರುಗಳು ಅವರಿಗೆ ಬೆನ್ನಿಗೆ ಇರಿದು ಹೋದದ್ದು ವಿಪರ್ಯಾಸ.

ಅದಿರಲಿ,
ಯಾರೊಬ್ಬರೂ ದೇವರಾಜ ಅರಸು ಆಗಲಾರರು, ಆದರೆ ಕರ್ನಾಟಕದಲ್ಲಿ ಅರಸು ಹಾಕಿಕೊಟ್ಟ ಬಹುಜನ ರಾಜಕಾರಣವನ್ನು ಮುನ್ನಡೆಸುವಲ್ಲಿ ಸಿದ್ದರಾಮಯ್ಯ ಅವರು ಥೇಟ್ ಅರಸು ಅವರಂತೆ ಕಾಣುತ್ತಾರೆ. ಹಾಗೆಂದು ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಧೋರಣೆಯನ್ನು, ತಾವು ಕೊಟ್ಟ ದುರ್ಬಲ ಜಾತಿಗಳ ಪರವಾದ ಯೋಜನೆಗಳನ್ನು ಅರಸು ಅವರ ಪ್ರಭಾವಳಿಯಿಂದ ಬಳಸಿಕೊಂಡಿದ್ದು ಎಂದು ಹೇಳಿಕೊಂಡ ಸಂದರ್ಭವಿಲ್ಲ. ಅದೇನಿದ್ದರೂ ನನ್ನದೇ ರಾಜಕೀಯ ಸಿದ್ದಾಂತ ಮತ್ತು ನಿಲುವು ಎಂದು ಸ್ವಯಂ ಕ್ರೆಡಿಟ್ ಪಡೆದುಕೊಳ್ಳುತ್ತಿರುವುದು ನಿಜ, ’ನಾನು ಅರಸು ಅಲ್ಲ, ನನ್ನನ್ನು ಅರಸು ಅವರಿಗೆ ಹೋಲಿಕೆ ಮಾಡಬೇಡಿ’ ಎಂದು ಎಷ್ಟೇ ಹೇಳಿದರೂ ಸಿದ್ದರಾಮಯ್ಯ ಅವರು ದೇವರಾಜ ಅರಸು ಎಂಬ ಮಾನವತಾವಾದಿ ರಾಜಕಾರಣಿಯ ಪ್ರಭೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು, ಜನರು ಮಾತ್ರ ಸಿದ್ದರಾಮಯ್ಯ ಅವರಲ್ಲಿ ಅರಸು ಅವರನ್ನು ಕಾಣುತ್ತಿದ್ದಾರೆ.

ಕುರಿಯ ಕಾಯುವ ಕುಟುಂಬದ ಮಗನೊಬ್ಬ ಈ ರಾಜ್ಯದ ಮುಖ್ಯಮಂತ್ರಿಯಾಗಿ ಹಸಿದವರ, ದುರ್ಬಲ ಭರವಸೆಯ ನಾಯಕನಾಗಿ ಧೀರ್ಘಕಾಲದ ಕಡೆಗೆ ಮುನ್ನಡೆಯುತ್ತಿರುವುದು ಬಹುಜನರಾಜಕಾರಣದ ಯಶೋಗಾಥೆ ಅಲ್ಲವೇ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments