ರಾಜಕೀಯ ಕುಲುಮೆಯಲ್ಲಿ ಉರಿದುರಿದು ಹೊಳೆದ ಬಂಗಾರ
ಸಾರೆಕೊಪ್ಪ ಬಂಗಾರಪ್ಪ ನವರು ತಮ್ಮ ಬಿಜೆಪಿ ಸೇರ್ಪಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.
“ಭಾರತ ಪ್ರಕಾಶಿಸುತ್ತಿದೆ” ಎಂಬ ಭ್ರಮೆಯನ್ನು ಹುಟ್ಟು ಹಾಕಿದ ವಾಜಪೇಯಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ, ಕೇಂದ್ರದಲ್ಲಿ ತಾವು ಸಚಿವರಾಗುವುದು ನಿಶ್ಚಿತ ಎಂಬ ವಿಶ್ವಾಸದಲ್ಲಿ ಬಿಜೆಪಿಗೆ ಸೇರಿದ ಬಂಗಾರಪ್ಪನವರದ್ದು ರಾಜಕೀಯ ಆತ್ಮಹತ್ಯೆಗೆ ಸಮವಾಗಿತ್ತು. ಅದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ನ್ನು ಬಗ್ಗು ಬಡಿಯುವ ಅವರ ಹಠ ರಾಜಕಾರಣದ ಮತ್ತೊಂದು ಅಧ್ಯಾಯ ಇದಾಗಿತ್ತು.

ಬಂಗಾರಪ್ಪನವರು ಲೋಕಸಭೆಗೆ ಆಯ್ಕೆಯಾದರೂ ಕೇಂದ್ರದಲ್ಲಿ “ಭಾರತ ಕಳೆಗುಂದಿತು”. ಆದರೆ ಈ ಬಂಗಾರಪ್ಪ ಎಂಬ ಜನನಾಯಕ ರಾಜ್ಯದಲ್ಲಿ ಕಾಂಗ್ರೆಸ್‌ನ ನಡ ಮುರಿದು ಬಿಜೆಪಿಯನ್ನು ಅಧಿಕಾರಕ್ಕೆ ಶಕ್ತಿ ಸಂಚಯನ ಮಾಡಿಕೊಟ್ಟಿದ್ದರು.
ಬಂಗಾರಪ್ಪನವರ ಬಿಜೆಪಿ ಸೇರ್ಪಡೆ ಸೆಕ್ಯೂಲರ್ ಸಿದ್ಧಾಂತ ರಾಜಕಾರಣದ ಕೋಟೆಯನ್ನು ಚಿದ್ರಗೊಳಿಸಿತು. ಅದಕ್ಕಿಂತ ಮುಖ್ಯವಾಗಿ ಸಕ್ಯೂಲರ್ ರಾಜಕಾರಣದ ವಿಶ್ವಾಸಾರ್ಹ ಮತಬ್ಯಾಂಕ್ ಆಗಿದ್ದ ದಲಿತರು, ಹಿಂದುಳಿದ ವರ್ಗಗಳನ್ನು ಕೋಮುವಾದಿ ರಾಜಕಾರಣದ ವಿಷ ಸರ್ಪಕ್ಕೆ ಸಹಸ್ರ ಕಾಲುಗಳನ್ನಾಗಿ ಜೋಡಿಸಿದರು. ಅಲ್ಪಸಂಖ್ಯಾತರನ್ನು ಕಳವಳಕ್ಕೆ ನೂಕಿದ್ದರು. ಹಾಗಿದ್ದಾಗ್ಯೂ ಬಂಗಾರಪ್ಪ ಈ ಎಲ್ಲಾ ಸಮುದಾಯಗಳಿಗೂ ಒಂದು ಅಚಲ ವಿಶ್ವಾಸದಂತೆ ಕಾಣುತ್ತಿದ್ದು ಒಂದು ಸೋಜಿಗವೇ ಸರಿ.
‘ಸರ್ , ನಿಮ್ಮಂತ ಸೆಕ್ಯುಲರ್ ಜನನಾಯಕರು ಕೋಮುವಾದಿ ಬಿಜೆಪಿಗೆ ಹೋಗಿದ್ದು ಸರೀನಾ?ಎಂದು ಪ್ರಶ್ನೆ ಎಸೆದಾಗ
” ಈ ಬಂಗಾರಪ್ಪ ಎಲ್ಲಿದ್ರೂ ಬಂಗಾರಪ್ಪನೇ …ಸಿದ್ಧಾಂತದ ಪ್ರಶ್ನೆ ಬಂದಾಗ ರಾಜೀ ಆಗೋ ಬಂಗಾರಪ್ಪ ನಾನಲ್ಲ. ನನ್ನ ಸಿದ್ಧಾಂತ ಎಲ್ಲಾ ಜಾತಿ, ವರ್ಗ, ಧರ್ಮವದವರಿಗೂ ಒಳ್ಳೇದು ಮಾಡೋದೇ ಆಗಿರ್ತದೆ. ಬಿಜೆಪಿಯನ್ನೇ ಸರಿ ಮಾಡಿಬಿಟ್ರಾಯಿತು.”! ಎಂದರು.
ಅವರು ಹೆಚ್ಚು ದಿನ ಬಿಜೆಪಿಯಲ್ಲಿ ಇರೋಲ್ಲ ಎಂದು ಅವತ್ತೇ ನನಗೆ ಅನಿಸಿಬಿಟ್ಟಿತು.
ಬಂಗಾರಪ್ಪನವರು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ
ಬಿಜೆಪಿ ಸೇರಿದ ವೇಗದಲ್ಲೇ ಬಿಜೆಪಿಯನ್ನು ಎಡಗಾಲಲ್ಲಿ ವದ್ದು ಹೊರಬಂದರು.
“ಸರ್, ಯಾಕೆ ಬಿಜೆಪಿಗೆ ಹೋಗಿದ್ರಿ …?!” ಎಂದು ಕೇಳಿದ್ದಕ್ಕೆ
” ಅಲ್ಲಿನ ಗರ್ಭಗುಡಿ ಹೆಂಗೈತೆ ಅಂತ ನೋಡ್ಕಂಡ್ ಬರೋಣ ಅಂತ ಹೋಗಿದ್ದೆ, ಅಲ್ಲಿ ಬರೀ ’ಜೀ…’ ಗಳೇ ತುಂಬ್ಕೊಂಡವೇ”. ಎಂದು ನಕ್ಕಿದ್ದರು.
ಶೆಟ್ಟರು-ಭಟ್ಟರ ಪಾರ್ಟಿಯಾಗಿದ್ದ ಬಿಜೆಪಿಗೆ ದಲಿತ, ಹಿಂದುಳಿದ ವರ್ಗಗಳ ಬಹುದೊಡ್ಡ ಬಹುಜನ ಸಮುದಾಯವನ್ನು ಕರೆದೊಯ್ದ ಬಂಗಾರಪ್ಪನವರು ಬಿಜೆಪಿಗೆ ದಲಿತ ಹಿಂದುಳಿದ ವರ್ಗಗಳ ದೊಡ್ಡ ಶಕ್ತಿ ತುಂಬಿ, ಫಸಲು ಬೆಳೆದು ಕೊಟ್ಟು ಏಕಾಂಗಿಯಾಗಿ ಹೊರಬಂದರು ಥೇಟ್ “ಬಂಗಾರದ ಮನುಷ್ಯ”ನಂತೆ.
ಬಂಗಾರಪ್ಪ ಅವರಿಂದಾಗಿಯೇ ಯಕಶ್ಚಿತರೆಲ್ಲಾ ವಿಧಾನ ಸೌಧದಲ್ಲಿ ಗರಿಗರಿ ಅಂಗಿಯಲ್ಲಿ ಮಿಂಚತೊಡಗಿದರು. (ಇಂದಿಗೂ ಕೂಡ) ಬಂಗಾರಪ್ಪನವರಿಂದ ಅಧಿಕಾರದ ರುಚಿ ಉಂಡವರೆಲ್ಲಾ ಈ ವಿಶ್ವಾಸ ದ್ರೋಹಕ್ಕೆ “ರಾಜಕಾರಣ” ಎಂಬ ಆತ್ಮವಂಚನೆ ಹೆಸರಿಟ್ಟುಕೊಂಡಿದ್ದಾರೆ.!!!

ಬಂಗಾರಪ್ಪನವರೇ ತಾವೇ ಗೊಬ್ಬರ, ನೀರು ಹಾಕಿ ದಷ್ಟ ಪುಷ್ಟಗೊಳಿಸಿದ್ದ ಕರ್ನಾಟಕ ಕೋಮುವಾದಿ ರಾಜಕಾರಣದ ಭೂತ ಕೊನೆಗೆ ಅವರನ್ನೇ ರಾಜಕೀಯವಾಗಿ ಬಲಿ ತೆಗೆದುಕೊಂಡಿತು. ಅಷ್ಟೇ ಅಲ್ಲ: ಬಹುಜನ ರಾಜಕಾರಣದ ಕೋಟೆ ಬಿರುಕುಗೊಂಡಿತು. ಕರ್ನಾಟಕ ರಾಜಕಾರಣದ ದೊಡ್ಡ ವಿಪರ್ಯಾಸವಿದು.
ಇಷ್ಟಾದರೂ… ಬಂಗಾರಪ್ಪ ಅವರ ಮೇಲಿನ ಜನ ಪ್ರೀತಿಯ ತೊರೆ ಜಿನುಗುತ್ತಲೆ ಇದೆ.
“ನಾನು ಎಲ್ಲಿದ್ರೂ ಈ ಬಂಗಾರಪ್ಪ ಬಂಗಾರಪ್ಪನೆ ಆಗಿರ್ತೀನಿ…” .ಎಂದು ಹೇಳುತ್ತಿದ್ದ ಬಂಗಾರಪ್ಪನವರು ರಾಜಕೀಯ ಕುಲುಮೆಯಲ್ಲಿ ಉರಿದಿರಿದು ಅಪ್ಪಟ ಬಂಗಾರಪ್ಪ ಆಗಿಯೇ ಇಂದಿಗೂ ಜನಮಾನಸದ ನೆನಪಿನಲ್ಲಿ ಜೀವಿಸಿದ್ದಾರೆ.
ಹ್ಯಾಪಿ ಬರ್ತಡೇ ಸರ್…
– ಎನ್.ರವಿಕುಮಾರ್
